ಒಬ್ರಿಯೆನ್, ವಿಲಿಯಂ: 1852-1928. ಐರ್ಲೆಂಡಿನ ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ, ಪತ್ರಿಕೋದ್ಯಮಿ, ಸಂಯುಕ್ತ ಐರಿಷ್ ಲೀಗಿನ ಸ್ಥಾಪಕ. ಕೌರ್ಕ್ ಕೌಂಟಿಯಲ್ಲಿನ ಮಾಲೋ ಎಂಬಲ್ಲಿ ಜನಿಸಿದ. ಕಾರ್ಕಿನಲ್ಲಿ ಉನ್ನತ ಶಿಕ್ಷಣ ಪಡೆದು 1869ರಲ್ಲಿ ಪತ್ರಿಕೋದ್ಯಮವನ್ನವಲಂಬಿಸಿದ. ಯುನೈಟೆಡ್ ಐರ್ಲೆಂಡ್ ಪತ್ರಿಕೆಯ ಸಂಪಾದಕನಾದದ್ದು 1881ರಲ್ಲಿ. ಕೆಲವೇ ತಿಂಗಳುಗಳಲ್ಲಿ ಆ ಪತ್ರಿಕೆಯನ್ನು ಸರ್ಕಾರ ನಿಷೇಧಿಸಿತು. ಒಬ್ರಿಯೆನನಿಗೆ ಜೈಲುವಾಸ ಲಭ್ಯವಾಯಿತು. ಗುತ್ತಿಗೆ ನಿಷೇಧ ಪ್ರಣಾಳಿಕೆಯನ್ನು ಈತ ಹೊರಡಿಸಿದ್ದು ಆಗಲೇ. ಅನಂತರ 1883ರ ಚುನಾವಣೆಯಲ್ಲಿ ಮಾಲೋ ಕ್ಷೇತ್ರದಿಂದ ಪಾರ್ಲಿಮೆಂಟಿಗೆ ಆಯ್ಕೆ ಹೊಂದಿ, 1895ರ ವರೆಗೂ ಅದರ ಸದಸ್ಯನಾಗಿದ್ದ. ಬಡರೈತರ ಉಳಿವಿಗಾಗಿ ಜಮೀನುದಾರರ ವಿರುದ್ಧ ಹೋರಾಟ ನಡೆಸಿ, ಸಮನ್ವಯ ಮತ್ತು ಸಹಿಷ್ಣುತೆಯ ತತ್ತ್ವವನ್ನು ಜನತೆಯ ಮುಂದಿಟ್ಟು, ಎಲ್ಲವೂ ಐರ್ಲೆಂಡಿಗಾಗಿ ಎಂಬ ಸಂಘವನ್ನು (ಆಲ್ ಫಾರ್ ಐರ್ಲೆಂಡ್ ಯೂನಿಯನ್) ಸ್ಥಾಪಿಸಿದ. 1910ರಲ್ಲಿ ಕಾರ್ಕ್ ಕೌಂಟಿಯಿಂದ ಪಾರ್ಲಿಮೆಂಟಿಗೆ ಮತ್ತೆ ಚುನಾಯಿತನಾದರೂ ಆ ವೇಳೆಗೆ ಐರ್ಲೆಂಡಿನ ತರುಣ ಪೀಳಿಗೆಗೆ ಸೌಮ್ಯ ಮಾರ್ಗದಲ್ಲಿ ನಂಬಿಕೆ ಕಡಿಮೆಯಾಗಿತ್ತು. ಒಬ್ರಿಯೆನನ ಹಿಂಬಾಲಕರ ಸಂಖ್ಯೆ ಕಡಿಮೆಯಾಯಿತು. ಒಂದನೆಯ ಮಹಾಯುದ್ಧದಲ್ಲಿ ಐರ್ಲೆಂಡೂ ಭಾಗವಹಿಸಬೇಕೆಂದು ವಾದಿಸಿದ ಈತ ಆ ಯುದ್ಧಾನಂತರ ಸಾರ್ವಜನಿಕ ಜೀವನದಿಂದ ನಿವೃತ್ತನಾದ. ಈತ  1928 ಫೆಬ್ರವರಿ 25ರಲ್ಲಿ, ಲಂಡನ್ನಿನಲ್ಲಿ ನಿಧನಹೊಂದಿದನು.	(ಬಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ